ಕೆಲವೇ ವರ್ಷಗಳ ಹಿಂದೆ,ಪಟಪಟ ಮಾತನಾಡುತ್ತಿದ್ದ, ಜಗತ್ತಿನ ಸಾಹಿತ್ಯವನ್ನೇ ಒರೆಗೆ ಹೆಚ್ಚುವವರಂತೆ, ತಮ್ಮ ವಿಸ್ತಾರವಾದ ಓದಿನ ಫಲವಾದ ಜ್ಞಾನವನ್ನು ಮಾತಿನ ಮೂಲಕ ಹಂಚುವವರಂತೆ ತೋರುತ್ತಿದ್ದ ಮೂರ್ತಿ ಅವರಿಗೆ ಈಗ ೮೩ ವರ್ಷ (ಜನನ: ಮೇ ೩, ೧೯೨೬). ಮಾತಿನ ಉತ್ಸಾಹವೇನೋ ಈಗಲೂ ಇದೆ. ಅವರ ನೆನಪುಗಳು ಕೂಡಾ ಕೈಕೊಟ್ಟಿಲ್ಲ. ಆದರೆ ಅವರ ಕಿವಿ ಮಂದವಾಗಿವೆ; ಕಣ್ಣುಗಳು ಕಾಂತಿಯನ್ನು ಕಳೆದುಕೊಂಡಿವೆ. ದೇಹ ಚೈತನ್ಯವನ್ನು ಕಳೆದುಕೊಂಡಿದೆ. 'ಜಡ'ತೆಯನ್ನು ಒಪ್ಪಿಕೊಳ್ಳುವಂತೆ ಅವರ ಹಾಸಿಗೆ ಅವರನ್ನು ಒತ್ತಾಯಿಸುತ್ತಿದೆ. ಆದರೂ ಮೂರ್ತಿ ಅದನ್ನು ಸುಲಭವಾಗಿ ಒಪ್ಪಿಕೊಳ್ಳುವವರಂತೆ ಕಾಣಿಸುವುದಿಲ್ಲ. ಅವರು ಮಾತಿನ ಉತ್ಸಾಹ ತೋರಿಸುತ್ತಾರೆ. ಆದರೆ ಗಂಟಲಿಗೆ ಶಕ್ತಿ ಇಲ್ಲ. ಅವರ ಮಾತುಗಳು ಸ್ಪಷ್ಟವಾಗಿ ಮೂಡುವುದಿಲ್ಲ.
ಅವರ ವಿಚಾರವೇನೋ ಈಗಲೂ ಪ್ರಖರವಾಗಿದೆ. ಅವರೂ ವಿಶ್ವದ ಚಲನೆಯ ಬಗ್ಗೆ ಹೇಳುತ್ತಿರುವಂತೆ ಕಂಡಿತು. ಜೀವನ ಮೌಲ್ಯಗಳ ಬಗೆಗೆ, ಸಾಹಿತ್ಯದ ಬಗೆಗೆ ಅವರು ಆಡುತ್ತಿದ್ದ ಮಾತುಗಳು ನನಗೆ ತಲುಪುತ್ತಿಲ್ಲ ಎಂದು ಮೂರ್ತಿ ಅವರಿಗೆ ಅನ್ನಿಸಿರಬೇಕು. ತಮ್ಮ ಮಗಳನ್ನು ಕರೆದು ಕೆಲವು ಪುಸ್ತಕ ತರಲು ಹೇಳಿದರು. ಅವೆಲ್ಲ ‘ಡಿವಿಕೆ ಮೂರ್ತಿ ಪ್ರಕಾಶನ’ದ ಪುಸ್ತಕಗಳು; ಹಾಗೆಯೇ ಡಿವಿಕೆ ಮೂರ್ತಿಯವರು ರಚಿಸಿದ ಕೃತಿಗಳು. ವಿದ್ವತ್ತು, ಓದಿನ ವಿಸ್ತಾರ, ದಟ್ಟ ಜೀವನಾನುಭವವಿರುವ, ನೂರಾರು ಪುಸ್ತಕಗಳನ್ನು ಪ್ರಕಟಿಸಿರುವ ಮೂರ್ತಿ ಅವರು ರಚಿಸಿರಿವ ಕೃತಿಗಳು ಕೇವಲ ನಾಲ್ಕು. ಅವುಗಳಲ್ಲಿ ಒಂದು: ಮೆಕರೆಂಕೊ ಅವರ ಲರ್ನಿಂಗ್ ಟು ಲಿವ್ ಬೃಹತ್ ಕಾದಂಬರಿಯ ಕನ್ನಡ ಅನುವಾದ. ಉಳಿದ ಮೂರು ಕೃತಿಗಳಲ್ಲಿ ಒಂದು - ಪರದೆಯ ಹಿಂದೆ - ವಿಡಂಬನೆ. ಇನ್ನೊಂದು ನೀಳ್ಗತೆ (ವೆಂಕಪ್ಪಯ್ಯನ ಕೊನೆಯ ಅಕ್ಷರಗಳು) ಮೂರನೆಯದು, ಜೀವನ ಮೌಲ್ಯ ಮತ್ತು ಸಾಹಿತ್ಯ. ಈ ಕೊನೆಯ ಪುಸ್ತಕ ಮೌಲಿಕ ಸಾಹಿತ್ಯ ಮೀಮಾಂಸೆ, ಚಿಂತನೆ
ಮುದ್ರಣ ಒಂದು ಮೋಹಕ ಕಲೆ, ಅಕ್ಷರ, ಪುಟ ವಿನ್ಯಾಸ, ಗುಣಾತ್ಮಕ ಮುದ್ರಣ - ಇಡೀ ಪುಸ್ತಕವೇ ಆಕರ್ಷಕ. ಈ ಪುಸ್ತಕಗಳನ್ನು ನೋಡಿದರೆ ಮೂರ್ತಿ ಅವರು ಪ್ರಕಾಶನವನ್ನು ಹೇಗೆ ತಮ್ಮ ಜೀವನ ಮೌಲ್ಯವಾಗಿ ಮಾಡಿಕೊಂಡಿದ್ದರು ಎಂಬುದು ಸ್ಪಷ್ಟವಾಗುತ್ತಿತ್ತು.
ಮೂರ್ತಿ ಅವರ ಕೌಟುಂಬಿಕ ಹಿನ್ನೆಲೆ ವೈದಿಕ ಮನೆತನದ್ದು. ಅವರ ತಂದೆ ಸಾಧಾರಣ ವ್ಯಕ್ತಿಯಾಗಿರಲಿಲ್ಲ. ಪಂಡಿತರತ್ನಂ ದೊಡ್ಡ ಬಳ್ಳಾಪುರ (ಕೋಲಾರ ಜಿಲ್ಲೆಯ ಬೇತಮಂಗಲದವರಾದ) ವಾಸುದೇವಾಚಾರ್ಯರೆಂದರೆ ಆ ಕಾಲಕ್ಕೆ ದೊಡ್ಡ ಹೆಸರು. ದಕ್ಷಿಣ ಭಾರತದ ಹೆಸರಾಂತ ಪಂಡಿತರ ಬಳಿ ಅವರು ನ್ಯಾಯ ವೇದಾಂತಗಳನ್ನು ಕಲಿತಿದ್ದರು. ಮೈಸೂರಿನ ಸಂಸ್ಕೃತ ಮಹಾಪಾಠಶಾಲೆಯಲ್ಲಿ ಮತ್ತು ಮಹಾರಾಜ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದರು. ‘ಗೀತಭಾವ’ (ಈ ಕೃತಿಯ ಪ್ರಕಾಶಕರು - ಡಿವಿಕೆ ಮೂರ್ತಿ ಅವರೇ) ಸೇರಿದಂತೆ ಕೆಲವು ಮಹತ್ವದ ಗ್ರಂಥಗಳನ್ನು ರಚಿಸಿದ್ದರು. ಈ ಹಿನ್ನೆಲೆಯಲ್ಲಿ ಸಹಜವಾಗಿಯೇ ಮೂರ್ತಿ ಅವರು ಬಾಲ್ಯದಲ್ಲಿಯೇ ಸಂಸ್ಕೃತದ ವೇದೋಪನಿಷತ್ತುಗಳನ್ನು ಅಧ್ಯಯನಮಾಡಿದರು. ಸ್ವತಂತ್ರ ಅಧ್ಯಯನದ ನಂತರ ಸಂಸ್ಕೃತ ಮಹಾಪಾಠಶಾಲೆಯಲ್ಲಿ ಕಾವ್ಯ ಪರೀಕ್ಷೆಯನ್ನು ಮಾಡಿಕೊಂಡರು. ಈ ಅವಧಿಯಲ್ಲಿಯೇ ಅವರಿಗೆ ಸಾಂಖ್ಯ ಲೋಕಾಯತ ತತ್ವಗಳ ಬಗ್ಗೆ ಆಸಕ್ತಿ ಮೂಡಿದ್ದು. ಮುಂದೆ ಮೂರ್ತಿ ಈ ತತ್ವಗಳನ್ನು ಆಳವಾಗಿ ಅಭ್ಯಾಸ ಮಾಡಿದರಲ್ಲದೆ ಇವುಗಳನ್ನೇ ತಮ್ಮ ಚಿಂತನೆಯ ತಳಹದಿಯನ್ನಾಗಿಯೂ ಮಾಡಿಕೊಂಡರು.
ಮೂರ್ತಿ ಅವರಿಗೆ ಪ್ರಕಾಶನ ಉದ್ಯಮ ಅನಿವಾರ್ಯವಾಗಿ ಯೇನೂ ಇರಲಿಲ್ಲ. ಅವರ ಆಸಕ್ತಿಯ ವಿಷಯ ಅರ್ಥಶಾಸ್ತ್ರ. ಅರ್ಥಶಾಸ್ತ್ರದಲ್ಲಿಯೇ ಅವರು ಬಿ.ಎ. (ಆನರ್ಸ್) ಪದವಿಯನ್ನು ಪಡೆದರು. ಚಿನ್ನದ ಪದಕವನ್ನೂ ಗಳಿಸಿದರು. ಪ್ರತಿಭಾವಂತ ತರುಣನಾದ ಈತ ತಮ್ಮ ವಿಭಾಗದಲ್ಲಿ ಅಧ್ಯಾಪಕನಾಗಿ ಇರಬೇಕೆಂಬುದು ವಿಭಾಗದ ಮುಖ್ಯಸ್ಥರಾಗಿದ್ದ ಪ್ರೊ. ವಿ.ಎಲ್.ಡಿಸೋಜಾ ಅವರ ಅಪೇಕ್ಷೆಯೂ ಆಗಿತ್ತು. ಇವರ ಉತ್ತರ ಪತ್ರಿಕೆಗಳ ಬಾಹ್ಯ ಮೌಲ್ಯಮಾಪಕರಾಗಿದ್ದ ಬೊಂಬಾಯಿ ವಿಶ್ವವಿದ್ಯಾನಿಲಯದ ಎಸ್.ಕೆ. ಮುರಂಜನ್ ಈ ಉತ್ತರಗಳನ್ನು ಬರೆದ ತರುಣನನ್ನು ಎಷ್ಟು ಮೆಚ್ಚಿಕೊಂಡಿದ್ದರೆಂದರೆ ಹೇಗಾದರೂ ಮಾಡಿ ಈ ಪ್ರತಿಭಾವಂತನನ್ನು ಸಂಶೋಧನೆಗೆ ತೊಡಗಿಸಬೇಕೆಂದು ಪ್ರಯತ್ನಿಸಿದರು. ಅರ್ಥಶಾಸ್ತ್ರದಲ್ಲಿ ಸಂಶೋಧನೆ ನಡೆಸುವಂತೆ ಪುಸಲಾಯಿಸಿದರು. ಅಗತ್ಯವಾದ ಶಿಷ್ಯವೇತನವನ್ನು ಕೊಡಿಸುವ ಭರವಸೆಯನ್ನೂ ನೀಡಿದರು. ಮುಂದೆ ಪ್ರಾಧ್ಯಾಪಕ ಹುದ್ದೆ ತಾನೇ ತಾನಾಗಿ ದೊರೆಯುತ್ತದೆಂಬ ಮಾತನ್ನೂ ಆಡಿದರು. ಆದರೆ ಮೂರ್ತಿ ಅವರಿಗೆ ಅದು ಯಾವುದೂ ಆಕರ್ಷಕವಾಗಿ ಕಾಣಿಸಲಿಲ್ಲ. ಬಿ.ಎ. ಮುಗಿದ ನಂತರ ತಾವೇನು ಮಾಡಬೇಕು ಎಂಬುದನ್ನು ಮೂರ್ತಿ ಆ ವೇಳೆಗಾಗಲೇ ನಿರ್ಧರಿಸಿಬಿಟ್ಟಿದ್ದರು.
ಅದಕ್ಕೆ ಹಿನ್ನೆಲೆಯೂ ಇತ್ತು. ತಮ್ಮ ಹನ್ನೊಂದನೇ ವಯಸ್ಸಿನಿಂದಲೇ ಮೂರ್ತಿ ತಮ್ಮ ಬಂಧುಗಳೇ ನಡೆಸುತ್ತಿದ್ದ ‘ಮಾಧವ ಅಂಡ್ ಸನ್ಸ್’ ಮತ್ತು ‘ಆನಂದ್ ಬ್ರದರ್ಸ್’ ಸಂಸ್ಥೆಗಳ ವಹಿವಾಟಿನಲ್ಲಿ ಆಸಕ್ತಿ ತೋರಿಸಿದ್ದರು. ಆ ಸಂಸ್ಥೆಗಳು ಪ್ರಕಟಿಸಿದ್ದ ಪುಸ್ತಕಗಳ ಮಾರಾಟ ಮೊದಲಾದ ವ್ಯವಹಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಯಾರ ಹಂಗೂ ಇಲ್ಲದೆ, ತಮಗನಿಸಿದ ರೀತಿಯಲ್ಲಿ ಬದುಕಬೇಕಾದರೆ ತಮ್ಮದೇ ಆದ ಉದ್ಯಮವನ್ನು ಸೃಷ್ಟಿಸಿಕೊಳ್ಳಬೇಕೆಂಬ ನಿರ್ಧಾರ ಅವರಲ್ಲಿ ಮೂಡಿತ್ತು. ಬಿ.ಎ. ಮುಗಿಸುವ ವೇಳೆಗ ಮೂರ್ತಿ ಅವರಿಗೆ ತಮ್ಮ ದಾರಿ ಸ್ಪಷ್ಟವಾಗಿ ಕಾಣಿಸಿತ್ತು.ಅವರು ಎಲ್ಲಿಯೂ ಹೋಗದೆ, ಮೈಸೂರಿನಲ್ಲಿಯೇ ನೆಲೆ ನಿಂತು ಪ್ರಕಾಶನ ಸಂಸ್ಥೆಯನ್ನು ಆರಂಭಿಸಿದರು. ಆರಂಭದ ದಿನಗಳಲ್ಲಿ ಮೂರ್ತಿ ಕಾಗದ, ಲೇಖನ ಸಾಮಗ್ರಿಗಳ ಮಾರಾಟಕ್ಕೆ ತೊಡಗಿ ನಂತರ ಪ್ರಕಾಶನ ಸಂಸ್ಥೆಯನ್ನು ಆರಂಭಿಸಿದ್ದು ಕನ್ನಡ ಸಾರಸ್ವತ ಲೋಕಕ್ಕೆ ಮಹತ್ವದ ಕೊಡುಗೆಯಾಯಿತು.